ಚಾಮೀರಾಪ್ಸ್-
ಅರೆಕೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಗ್ರೀಕ್ ಭಾಷೆಯಲ್ಲಿ ಚಾಮೀರಾಪ್ಸ್ ಎಂದರೆ ಕುಳ್ಳಾದ ಪೊದೆ ಎಂದರ್ಥ. ಇದು ತೆಂಗು ಜಾತಿಯ ಸಸ್ಯಗಳಲ್ಲೆಲ್ಲ ಬಹುಗಟ್ಟಿಮುಟ್ಟಾದುದು. ಇದನ್ನು ಉದ್ಯಾನ ವನಗಳಲ್ಲಿ ಮತ್ತು ಗಾಜಿನ ಮನೆಗಳಲ್ಲಿ ಬೆಳೆಸಲಾಗುತ್ತದೆ. ಇದರ ಕಾಂಡದಿಂದ ಪಡೆಯಲಾಗುವ ನಾರಿನಿಂದ ಜಮಖಾನ, ಕಾಲು ಒರೆಸುವ ತಟ್ಟು ಮುಂತಾದುವನ್ನು ತಯಾರಿಸುವುದುಂಟು. ಇದು 4'-20' ಎತ್ತರದ ಗಿಡ. ಕಾಂಡ ಒಂಟಿಯಾಗಿರುತ್ತದೆ ಇಲ್ಲವೆ ಕವಲೊಡೆದಿರುತ್ತದೆ. ತೆಂಗಿನಲ್ಲಿರುವಂತೆಯೆ ಎಲೆಗಳು (ಗರಿಗಳು) ಕಾಂಡದ ತುದಿಯಲ್ಲಿ ಕಿರೀಟದಂತೆ ಜೋಡಣೆಗೊಂಡಿವೆ. ಒಂದೊಂದು ಎಲೆಯೂ ಬೀಸಣಿಗೆಯಾಕಾರದ್ದು. ಪ್ರತಿಯೊಂದರಲ್ಲೂ ಉದ್ದನೆಯ ಒಂದು ತೊಟ್ಟು, ಅದರ ತುದಿಯಲ್ಲಿ ಕೈಯಲ್ಲಿನ ಬೆರಳುಗಳಂತೆ ಜೋಡಣೆಗೊಂಡಿರುವ ಕವಚಗಳಿಂದ ಆವೃತವಾಗಿದೆ. ಹೂಗಳು ಚಿಕ್ಕ ಗಾತ್ರದವು; ಅವುಗಳ ಬಣ್ಣ ಹಳದಿ. ಹಣ್ಣು ಗೋಳಾಕಾರದ್ದು. ಹಣ್ಣಿನ ಬಣ್ಣ ಹಳದಿ ಇಲ್ಲವೆ ಕೆಂಪು. ಚಾಮೀರಾಪ್ಸ್ ಜಾತಿಯಲ್ಲಿ ಹ್ಯೂಮಿಲಿಸ್ ಮತ್ತು ಎಕ್ಸೆಲ್ಸ ಎಂಬ ಎರಡು ಪ್ರಭೇದಗಳಿವೆ. ಇವನ್ನು ಬೀಜಗಳಿಂದ ಇಲ್ಲವೆ ಮೋಸುಗಳಿಂದ (ಸಕ್ಕರ್ಸ್) ವೃದ್ಧಿಸಬಹುದು.
(ಎನ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ